ಮುಂಬರಲಿರುವ ‘Dear Vikram’ ಚಿತ್ರ ಈಗ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಲು ಕಾರಣವೇನು?

Updated on 25-Jun-2022
HIGHLIGHTS

ಡಿಯರ್ ವಿಕ್ರಮ್ (Dear Vikram) ಟ್ರೇಲರ್ ಬಿಡುಗಡೆಯಾಗಿದ್ದು ಜೂನ್ 30ರಂದು ವೂಟ್ ಸೆಲೆಕ್ಟ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಡಿಯರ್ ವಿಕ್ರಮ್ (Dear Vikram) ಸಿನಿಮಾ ವೂಟ್ ಸೆಲೆಕ್ಟ್ ನಲ್ಲಿ ನೇರವಾಗಿ ಇದೇ ಜೂನ್ 30ರಂದು ಬರಲಿದೆ

ಕ್ರಾಂತಿಕಾರಿಯೊಬ್ಬನ ಪ್ರೇಮಕತೆಯನ್ನೊಳಗೊಂಡ ವಿಭಿನ್ನ ಸಿನಿಮಾ ‘ಡಿಯರ್ ವಿಕ್ರಮ್’ನ ಟ್ರೇಲರ್ ಬಿಡುಗಡೆಯಾಗಿದ್ದು ಜೂನ್ 30ರಂದು ವೂಟ್ ಸೆಲೆಕ್ಟ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಚಲನಚಿತ್ರ ‘ಡಿಯರ್ ವಿಕ್ರಮ್’ನಲ್ಲಿ ಹೆಸರಾಂತ ನಟ ನೀನಾಸಂ ಸತೀಶ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಸಿನಿರಸಿಕರ ಗಮನ ಸೆಳೆದಿತ್ತು. ಈಗ ಬಿಡುಗಡೆಯಾಗಿರುವ ಟ್ರೇಲರ್ ಆ ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಬಿಗಿಯಾದ ಚಿತ್ರಕತೆ ಹಾಗೂ ಮನಮುಟ್ಟುವ ಅಭಿನಯದಿಂದಾಗಿ ಈ ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್‌ನಲ್ಲಿ ಸೂಚನೆಗಳಿವೆ. ಹಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಜೇಕಬ್ ವರ್ಗೀಸ್ ತಂಡದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಕೆ.ಎಸ್ ನಂದೀಶ್ ‘ಡಿಯರ್ ವಿಕ್ರಮ್’ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಭಟ್ಕಳ, ಕರ್ನೂಲ್ ಅಲ್ಲದೆ ಮಲೇಶಿಯಾದಲ್ಲೂ ಚಿತ್ರೀಕರಣ ಮಾಡಲಾಗಿದೆ.

ಡಿಯರ್ ವಿಕ್ರಮ್ (Dear Vikram) ಚಲನಚಿತ್ರ

ತಮ್ಮ ಹೊಸ ಸಿನಿಮಾದ ಬಗ್ಗೆ ಉತ್ಸುಕರಾಗಿ ಮಾತಾಡಿದ ನಟ ಸತೀಶ್, ‘ಶ್ರದ್ಧಾ ಶ್ರೀನಾಥ್ ಅವರೊಂದಿಗೆ ಇದು ನನ್ನ ಮೊದಲ ಸಿನಿಮಾ. ವಸಿಷ್ಟ ಸಿಂಹ, ಸೋನು ಗೌಡ ಅಚ್ಯುತ್ ಕುಮಾರ್ ಮುಂತಾದ ಹಲವು ಹೆಸರಾಂತ ನಟ ನಟಿಯರು ಚಿತ್ರಕ್ಕೆ ತಮ್ಮ ಪ್ರತಿಭೆಯನ್ನು ಧಾರೆಯೆರೆದಿದ್ದಾರೆʼ ಎಂದರು. ನಟಿ ಶ್ರದ್ಧಾ ಶ್ರೀನಾಥ್ ಮಾತನಾಡಿ ‘ವಾಸ್ತವವನ್ನು ಬಣ್ಣದ ಕನ್ನಡಕದೊಳಗಿನಿಂದ ಮಾತ್ರ ನೋಡಿ ಬೆಳೆದ ಹುಡುಗಿಯ ಪಾತ್ರ ನನ್ನದು’ ಎಂದರು. ಈ ಪಾತ್ರವನ್ನು ಎಂದೂ ಮರೆಯೋಕಾಗಲ್ಲ ಎಂದೂ ಅವರು ತಿಳಿಸಿದರು.

ನಿರ್ದೇಶಕ ನಂದೀಶ್ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದನ್ನು ಬಿಚ್ಚಿಟ್ಟರು. ಶೂಟಿಂಗಿಗೆ ಹೋಗುವಾಗ ಮೊಣಕಾಲೆತ್ತರ ಇದ್ದ ನದಿ ನೀರು ವಾಪಾಸ್ ಬರುವಾಗ ಎದೆ ಮಟ್ಟಕ್ಕೆ ಏರಿದಾಗ ಚಿತ್ರತಂಡಕ್ಕಾದ ಆತಂಕವನ್ನು ಅವರು ನೆನಪಿಸಿಕೊಂಡರು. ಆಗ ಭಯವಾಗಿದ್ದರೂ ಈಗದು ಹಿತವಾದ ನೆನಪು ಎಂದು ಅವರು ಹೇಳಿದರು.

ಈಗ ಬಿಡುಗಡೆಯಾಗಿರುವ ಟ್ರೇಲರನ್ನು ನೀವು ಸವಿದು ಮುಗಿಸುವುದರೊಳಗೇ ಡಿಯರ್ ವಿಕ್ರಮ್ ಸಿನಿಮಾ ವೂಟ್ ಸೆಲೆಕ್ಟ್ ನಲ್ಲಿ ನೇರವಾಗಿ ಇದೇ ಜೂನ್ 30ರಂದು ಬರಲಿದೆ. ಪತ್ರಿಕಾಗೋಷ್ಠಿಯಲ್ಲಿ ವೂಟ್ ಸೆಲೆಕ್ಟ್  ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲರ್ಸ್ ವಾಹಿನಿಯ ಮುಖ್ಯಸ್ಥರಾದ ಪರಮೇಶ್ ಗುಂಡ್ಕಲ್ ನೀಡಿದರು.

Ravi Rao

Kannada Tech Writer: Ravi Rao is an Indian technology Journalist who has been covering day to day consumer Technology News, Features, How To and much more since 2016.

Connect On :