ಕಳೆದ 6 ತಿಂಗಳಲ್ಲಿ ಕನ್ನಡದ ಈ 3 ಬ್ಲಾಕ್ ಬಸ್ಟರ್ ಸಿನಿಮಾಗಳ ಫಲಿತಾಂಶಗಳೇನು ಗೊತ್ತಾ?

ಕಳೆದ 6 ತಿಂಗಳಲ್ಲಿ ಕನ್ನಡದ ಈ 3 ಬ್ಲಾಕ್ ಬಸ್ಟರ್ ಸಿನಿಮಾಗಳ ಫಲಿತಾಂಶಗಳೇನು ಗೊತ್ತಾ?
HIGHLIGHTS

ಕನ್ನಡ ಜೊತೆಗೆ ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಯಲ್ಲೂ ಜೇಮ್ಸ್ (James) 100 ಕೋಟಿ ರೂಪಾಯಿಗಿಂತಲೂ ಅಧಿಕ ಗಳಿಕೆ ಮಾಡಿ ಹೊಸ ದಾಖಲೆ ನಿರ್ಮಿಸಿತು.

ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾವು ಏಪ್ರಿಲ್ 14ರಂದು ತೆರೆಗೆ ಬಂದಿತ್ತು. ಈ ಸಿನಿಮಾದ ಮೇಲೆ ವಿಶ್ವವೇ ಕಣ್ಣಿಟ್ಟಿತ್ತು.

ಜೂನ್ 10ರಂದು ತೆರೆಕಂಡ ಈ 777 ಚಾರ್ಲಿ (777 Charlie) ಸಿನಿಮಾ 25 ದಿನ ಪೂರೈಸಿ ದೇಶದ 450 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮುಂದುವರಿಸಿದೆ.

ವಿಶ್ವದದ್ಯಾಂತ ಕೊರೊನಾದಿಂದ ದೊಡ್ಡ ಹೊಡೆತಕ್ಕೊಳಗಾದ ಕ್ಷೇತ್ರಗಳಲ್ಲಿ ಸಿನಿಮಾರಂಗ ಮುಂಚೂಣಿಯಲ್ಲಿ ನಿಲ್ಲುತ್ತದೆ. 2020 ಮತ್ತು 2021ರ ಬಹುಪಾಲು ಅವಧಿಯನ್ನು ಕೊರೊನಾವೇ ಆಕ್ರಮಿಸಿಕೊಂಡಿತ್ತು. ಅಂದುಕೊಂಡ ಸಮಯಕ್ಕೆ ಸಿನಿಮಾಗಳನ್ನು ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ. ಸಾಕಷ್ಟು ಸಿನಿಮಾ ನಿರ್ಮಾಪಕರು ಆರ್ಥಿಕ ತೊಂದರೆಗೆ ಒಳಗಾದರು. 2022ರ ಆರಂಭದಲ್ಲೂ ಕೊರೊನಾ ಮೂರನೇ ಅಲೆ ಸದ್ದು ಮಾಡಿತ್ತು. ಆದರೆ ಅಷ್ಟೇ ವೇಗವಾಗಿ ಅದು ಕಮ್ಮಿ ಆಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಈವರೆಗೂ ತೆರೆಕಂಡಿರುವ ಸಿನಿಮಾಗಳ ಸಂಖ್ಯೆ ಶತಕದ ಸನಿಹವಿದೆ.

ಎಷ್ಟೋ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದಿದ್ದೇ ಗೊತ್ತಾಗಲಿಲ್ಲ. ಮತ್ತಷ್ಟು ಒಳ್ಳೆಯ ಸಿನಿಮಾಗಳಿದ್ದರೂ ಅದ್ಯಾಕೋ ಜನರು ಥಿಯೇಟರ್‌ನತ್ತ ಮುಖ ಮಾಡಲಿಲ್ಲ. ಇದ್ದಿದ್ದರಲ್ಲಿ ಜೇಮ್ಸ್ (James), ಕೆಜಿಎಫ್ ಚಾಪ್ಟರ್ 2 (KGF Chapter 2), 777 ಚಾರ್ಲಿ (777 Charlie) ಸಿನಿಮಾಗಳು ದಾಖಲೆ ಮೇಲೆ ದಾಖಲೆ ಬರೆದವು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ಗುರುತಿಸುವಂತೆ ಮಾಡಿದವು. ಬಾಕ್ಸ್ ಆಫೀಸ್‌ನಲ್ಲಿ ಶತಕೋಟಿ ಕ್ಲಬ್ ಸೇರಿದವು ಅನ್ನೋದು ಸಮಾಧಾನಕರ ಸಂಗತಿ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ (James)

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ಸಿನಿಮಾವು ಮಾರ್ಚ್ 17ರಂದು ತೆರೆಗೆ ಬಂದಿತ್ತು. ಅಂದು ಪುನೀತ್ ಅವರ ಹುಟ್ಟುಹಬ್ಬ ಕೂಡ. ಅಪ್ಪು ನಟನೆಯ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಇದು ತುಂಬ ಎಮೋಷನಲ್ ಸಿನಿಮಾ ಆಗಿತ್ತು. ವಿಶ್ವಾದ್ಯಂತ ನೂರಾರು ಥಿಯೇಟರ್‌ಗಳಲ್ಲಿ ಜೇಮ್ಸ್ ತೆರೆಗೆ ಬಂದಿತ್ತು. ಜನರು ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡಿದರು. ರಾಜ್ಯಾದ್ಯಂತ ಜೇಮ್ಸ್ ತೆರೆಕಾಣುವ ದಿನದಂದು ಜಾತ್ರೆ ಮಾಡಿದರು ಹಬ್ಬದಂತೆ ಆಚರಣೆ ಮಾಡಿದರು. ಕನ್ನಡ ಜೊತೆಗೆ ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗಿತ್ತು. ಜೇಮ್ಸ್ 100 ಕೋಟಿ ರೂಪಾಯಿಗಿಂತಲೂ ಅಧಿಕ ಗಳಿಕೆ ಮಾಡಿ ಹೊಸ ದಾಖಲೆ ನಿರ್ಮಿಸಿತು.

ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್: ಚಾಪ್ಟರ್ 2 (KGF Chapter 2)

ಕೆಜಿಎಫ್: ಚಾಪ್ಟರ್ 2 ಸಿನಿಮಾವು ಏಪ್ರಿಲ್ 14ರಂದು ತೆರೆಗೆ ಬಂದಿತ್ತು. ಈ ಸಿನಿಮಾದ ಮೇಲೆ ವಿಶ್ವವೇ ಕಣ್ಣಿಟ್ಟಿತ್ತು. ತೆರೆಕಂಡ ದಿನದಿಂದಲೇ ಹೊಸ ದಾಖಲೆಗಳನ್ನು ಕೆಜಿಎಫ್: ಚಾಪ್ಟರ್ 2 ಸೃಷ್ಟಿಸಿತು. ಬಾಲಿವುಡ್‌ನಲ್ಲಿ ಸುಮಾರು 450 ಕೋಟಿ ರೂಪಾಯಿ ಗಳಿಕೆ ಮಾಡಿದ ಈ ಸಿನಿಮಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿತು. ವಿಶ್ವಾದ್ಯಂತ 1250 ಕೋಟಿ ರೂಪಾಯಿ ಗಳಿಕೆ ಮಾಡಿದ ಕೆಜಿಎಫ್: ಚಾಪ್ಟರ್ 2 ಚಿತ್ರವು ಭಾರತದ ಚಿತ್ರರಂಗದ ಹಲವು ಸಿನಿಮಾಗಳ ದಾಖಲೆಗಳನ್ನು ಪುಡಿಗಟ್ಟಿತು. ಕನ್ನಡಿಗರ ಪಾಲಿಗೆ ಕೆಜಿಎಫ್: ಚಾಪ್ಟರ್ 2 ಸಿನಿಮಾ ಹೆಮ್ಮೆ ಎಂದೇ ಹೇಳಬೇಕು. ಓಟಿಟಿಯಲ್ಲೂ ಉತ್ತಮ ಟ್ರೆಂಡಿಂಗ್‌ನಲ್ಲಿದೆ ಈ ಸಿನಿಮಾ.

ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ (777 Charlie)

ರಕ್ಷಿತ್ ಶೆಟ್ಟಿ ನಟನೆಯಲ್ಲಿ ನಿರ್ಮಿಸಿರುವ 777 ಚಾರ್ಲಿ ಸಿನಿಮಾವು ಈವರೆಗೂ 150 ಕೋಟಿ ರೂಪಾಯಿಗಳಿಗೂ ಅಧಿಕ ವ್ಯವಹಾರ ಮಾಡಿದೆ. ಕೆಜಿಎಫ್‌ನಂತೆಯೇ 777 ಚಾರ್ಲಿ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದೆ. ಕರ್ನಾಟಕದಲ್ಲಿ ಈ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಕ್ಕಿತ್ತು. ಜೂನ್ 10ರಂದು ತೆರೆಕಂಡ ಈ ಸಿನಿಮಾ 25 ದಿನ ಪೂರೈಸಿ ದೇಶದ 450 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ಈಗಲೂ ಈ ಸಿನಿಮಾಗೆ ಪ್ರೇಕ್ಷಕರು ಬರುತ್ತಿದ್ದಾರೆ. ನಿರ್ಮಾಪಕರಿಗೆ ಏನಿಲ್ಲವೆಂದರೆ 90ರಿಂದ 100 ಕೋಟಿ ರೂಪಾಯಿ ಶೇರ್ ಸಿಗುವ ಸಾಧ್ಯತೆ ಇದೆ. ಸಿನಿಮಾದಿಂದ ಬಂದ ಲಾಭದಲ್ಲಿ ಶೇ.10ರಷ್ಟನ್ನ ಚಿತ್ರತಂಡ 200 ಜನರಿಗೆ ಹಂಚಲು ರಕ್ಷಿತ್ ಶೆಟ್ಟಿ ನಿರ್ಧಾರ ಮಾಡಿದ್ದಾರೆ. ಹಾಗೆಯೇ 5% ಲಾಭವನ್ನು ಎನ್‌ಜಿಓಗಳಿಗೆ ನೀಡಲು ನಿರ್ಧಾರ ಮಾಡಿದ್ದಾರೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo