ಕನ್ನಡಿಗರ ಆಗ್ರಹಕ್ಕೆ ಮಣಿದ ಹಾಲಿವುಡ್: ಕನ್ನಡ ಸೇರಿ 5 ಭಾರತೀಯ ಭಾಷೆಗಳಲ್ಲಿ ಬರುತ್ತಿದೆ ಅವತಾರ್‌ 2

ಕನ್ನಡಿಗರ ಆಗ್ರಹಕ್ಕೆ ಮಣಿದ ಹಾಲಿವುಡ್: ಕನ್ನಡ ಸೇರಿ 5 ಭಾರತೀಯ ಭಾಷೆಗಳಲ್ಲಿ ಬರುತ್ತಿದೆ ಅವತಾರ್‌ 2
HIGHLIGHTS

ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದ 'ಅವತಾರ್ -2' ತಂಡ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುತ್ತಿದೆ.

ವಾರದ ನಂತರ ದಿಢೀರನೇ 'ಅವತಾರ್ 2 (Avatar 2) ಕನ್ನಡ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡ ಅಚ್ಚರಿ ಮೂಡಿಸಿದೆ.

20th Century Studios ಬ್ಯಾನರ್‌ನಲ್ಲಿ ಈ ಅವತಾರ್ 2 (Avatar 2) ಎಪಿಕ್ ಸೈನ್ಸ್ ಫಿಕ್ಷನ್ ಸಿನಿಮಾ ನಿರ್ಮಾಣವಾಗಿದೆ.

ಕನ್ನಡಿಗರ ಆಕ್ರೋಶಕ್ಕೆ ಮಣಿದ 'ಅವತಾರ್ -2' ತಂಡ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುತ್ತಿದೆ. ಸದ್ಯ ಕನ್ನಡ ಟ್ರೈಲರ್ ರಿಲೀಸ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊನೆಗೂ ತಪ್ಪು ಸರಿ ಪಡಿಸಿಕೊಂಡಿದ್ದಕ್ಕೆ ಹಾಗೂ ಕನ್ನಡಕ್ಕೆ ಡಬ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ನಾವು ಕನ್ನಡದಲ್ಲೇ ನೋಡುತ್ತೇನೆ ಎನ್ನುತ್ತಿದ್ದಾರೆ. ಕಳೆದ ವಾರ 'ಅವತಾರ್: ದಿ ವೇ ಆಫ್ ವಾಟರ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. 

ಅವತಾರ್ 2: ದಿ ವೆ ಆಫ್ ವಾಟರ್ (Avatar 2 The Way Of Water)

ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿ ಸದ್ದು ಮಾಡಿತ್ತು. ಆದರೆ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ ಕನ್ನಡಿಗರು ಚಿತ್ರತಂಡದ ವಿರುದ್ಧ ಗರಂ ಆಗಿದ್ದರು. ಪ್ರತಿ ಬಾರಿ ಕನ್ನಡಕ್ಕೆ ಯಾಕೆ ಅನ್ಯಾಯ? ಎಂದು ಕೇಳುತ್ತಿದ್ದರು. ಕನ್ನಡ ಸಿನಿಮಾಗಳು ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಇಂತಹ ಸಮಯದಲ್ಲಿ ದಕ್ಷಿಣ ಭಾರತದ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್‌ ಆಗುತ್ತಿರುವ ಚಿತ್ರವನ್ನು ಕನ್ನಡಕ್ಕೆ ಯಾಕೆ ಡಬ್ ಮಾಡುತ್ತಿಲ್ಲ? ಇದು ಕನ್ನಡ ಪ್ರೇಕ್ಷಕರಿಗೆ ತೋರುತ್ತಿರುವ ಅಗೌರವ ಎಂದು ಕಿಡಿ ಕಾರಿದ್ದರು. ಕನ್ನಡದಲ್ಲಿ ಡಬ್ ಮಾಡಲೇಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿತ್ತು.

ಈ ಹಿಂದೆ ಬಿಡುಗಡೆಯಾಗಿದ್ದ 'ಅವತಾರ್- 2' ಪೋಸ್ಟರ್‌ಗಳಲ್ಲಿ ಕನ್ನಡದ ಹೆಸರನ್ನು ಸೇರಿಸಲಾಗಿತ್ತು. ಕನ್ನಡ ವರ್ಷನ್ ಟೀಸರ್ ಕೂಡ ಬಿಡುಗಡೆಯಾಗಿತ್ತು. ಆದರೆ ಹೊಸ ಪೋಸ್ಟರ್‌ನಲ್ಲಿ ಕನ್ನಡದ ಹೆಸರು ಇರಲಿಲ್ಲ. ಯೂಟ್ಯೂಬ್‌ನಲ್ಲಿ ಕನ್ನಡ ಟೀಸರ್ ಕೂಡ ಡಿಲೀಟ್ ಆಗಿತ್ತು. ಇದು ಎಲ್ಲೋ ಒಂದು ಕಡೆ ಕನ್ನಡಕ್ಕೆ ಚಿತ್ರ ಡಬ್ ಮಾಡುತ್ತಿಲ್ಲ ಎನ್ನುವುದರ ಸುಳಿವು ಕೊಟ್ಟಿತ್ತು. ಕನ್ನಡ ಟ್ರೈಲರ್ ಬಾರದೇ ಇದ್ದಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ಕೊಟ್ಟಂತಾಗಿತ್ತು.

ಸಖತ್ ಸದ್ದು ಮಾಡ್ತಿದೆ ಕನ್ನಡ ಟ್ರೈಲರ್

ವಾರದ ನಂತರ ದಿಢೀರನೇ 'ಅವತಾರ್: ದಿ ವೇ ಆಫ್ ವಾಟರ್' ಕನ್ನಡ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡ ಅಚ್ಚರಿ ಮೂಡಿಸಿದೆ. 20th Century Studios ಬ್ಯಾನರ್‌ನಲ್ಲಿ ಈ ಎಪಿಕ್ ಸೈನ್ಸ್ ಫಿಕ್ಷನ್ ಸಿನಿಮಾ ನಿರ್ಮಾಣವಾಗಿದೆ. ಅಫೀಷಿಯಲ್ ಯೂಟ್ಯೂಬ್‌ ಚಾನಲ್‌ನಲ್ಲೇ ಕನ್ನಡ ಟ್ರೈಲರ್ ಅಪ್‌ಲೋಡ್ ಆಗಿದ್ದು ನೋಡಿದವರು ಮೆಚ್ಚಿಕೊಂಡಿದ್ದಾರೆ. ಡಬ್ಬಿಂಗ್ ಕ್ವಾಲಿಟಿ ಕೂಡ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೊನೆಗೂ ಕನ್ನಡಕ್ಕೆ ಚಿತ್ರವನ್ನು ಡಬ್ ಮಾಡಿದ್ದಕ್ಕೆ ಧನ್ಯವಾದಗಳು ಎನ್ನುತ್ತಿದ್ದಾರೆ.

ಪಂಡೋರ ಪ್ರಪಂಚದಲ್ಲಿ ಅದ್ಭುತ ಕಥೆ

ನಿರ್ದೇಶಕ ಜೇಮ್ಸ್ ಕ್ಯಾಮರೂನ್ 'ಅವತಾರ್ -2' ಎನ್ನುವ ಮತ್ತೊಂದು ಅದ್ಭುತ ದೃಶ್ಯಕಾವ್ಯವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ದಶಕದ ಹಿಂದೆ ಪಂಡೋರ ಪ್ರಪಂಚದಲ್ಲಿ ಅದ್ಭುತ ಕಥೆ ಹೇಳಿ ಸಕ್ಸಸ್ ಕಂಡಿದ್ದರು. ಅವತ್ತಿನ ಕಾಲಕ್ಕೆ ಎಲ್ಲಾ ಹಾಲಿವುಡ್ ಸಿನಿಮಾಗಳ ಬಾಕ್ಸಾಫೀಸ್ ದಾಖಲೆಯನ್ನು ಅಳಿಸಿ ಹಾಕಿ ಈ ಸಿನಿಮಾ ದಾಖಲೆ ಬರೆದಿತ್ತು. ಈ ಬಾರಿ ಅದಕ್ಕಿಂತಲೂ ರೋಚಕವಾಗಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಈ ಬಾರಿ ನೀರಿನ ಆಳದ ಸಾಹಸಗಳು ಪ್ರೇಕ್ಷಕರಿಗೆ ಮತ್ತಷ್ಟು ಮಜಾ ಕೊಡಲಿದೆ. ಅಷ್ಟೇ ಅಲ್ಲ ಭಾವನಾತ್ಮಕ ಸನ್ನಿವೇಶಗಳು ಚಿತ್ರದಲ್ಲಿರೋದು ಗೊತ್ತಾಗುತ್ತಿದೆ.

ಡಿಸೆಂಬರ್ 16ಕ್ಕೆ ಅವತಾರ್- 2

ಪ್ರಪಂಚದ 160 ಭಾಷೆಗಳಲ್ಲಿ 'ಅವತಾರ್‌- 2' ಸಿನಿಮಾ ಬಿಡುಗಡೆಯಾಗಲಿದೆ. ಆ ಮೂಲಕ ಚಿತ್ರದ ಹೊಸ ದಾಖಲೆ ಬರೀತಿದೆ. ಇಷ್ಟು ಭಾಷೆಗಳಿಗೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುತ್ತಿರುವ ತಂಡ ಕನ್ನಡಕ್ಕೆ ಡಬ್ ಮಾಡಲು ಮೀನಾಮೇಷ ಎಣಿಸಿದ್ದು ಯಾಕೆ ಎನ್ನುವುದು ಗೊತ್ತಾಗುತ್ತಿಲ್ಲ. ಡಿಸೆಂಬರ್ 16ಕ್ಕೆ ಬಹಳ ದೊಡ್ಡಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. 3D ಹಾಗೂ ಐಮ್ಯಾಕ್ಸ್ 3D ವರ್ಷನ್‌ಗಳಲ್ಲಿ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವುದಂತೂ ಗ್ಯಾರೆಂಟಿಯಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo