ಆಂಡ್ರಾಯ್ಡ್ (Android) ಸ್ಮಾರ್ಟ್ಫೋನ್ ಬಳಕೆ ಮಾಡುತ್ತಿರುವ ಬಹುಪಾಲು ಜನರು ಈ ಟ್ರೂ ಕಾಲರ್ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿ ಬಳಕೆ ಮಾಡುತ್ತಿದ್ದಾರೆ. ಮುಖ್ಯವಾಗಿ ಈ ಅಪ್ಲಿಕೇಶನ್ ಮೂಲಕ ಅಪರಿಚಿತ ಸಂಖ್ಯೆಯಿಂದ ಬರುವ ಕರೆ ಯಾರದ್ದು ಎಂದು ಕಂಡುಹಿಡಿಯಲು ಅಥವಾ ನಂಬರ್ ಬ್ಲಾಕ್ ಮಾಡಲು ಜೊತೆಗೆ ಕಾಲ್ ರೆಕಾರ್ಡಿಂಗ್ ಫೀಚರ್ಸ್ ಲಭ್ಯವಿದ್ದು ಇದರಿಂದ ಅನೇಕರು ಕರೆಗಳನ್ನು ರೆಕಾರ್ಡಿಂಗ್ ಮಾಡುತ್ತಿದ್ದಾರೆ. ಆದರೀಗ ಗೂಗಲ್ (Google) ತಂದಿರುವ ಹೊಸ ನಿಯಮದಿಂದ ಟ್ರೂ ಕಾಲರ್ಗೆ ದೊಡ್ಡ ಪೆಟ್ಟುಬಿದ್ದಿದೆ. ಅದೇನೆಂದರೆ ಟ್ರೂ ಕಾಲರ್ ಆ್ಯಪ್ನಲ್ಲಿ ಮೇ 11ರಿಂದ ಕಾಲ್ ರೆಕಾರ್ಡಿಂಗ್ ಫೀಚರ್ ಕೆಲಸ ಮಡುವುದಿಲ್ಲ.
ಮೇ. 11ರ ಬಳಿಕ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು ಆ್ಯಪ್ ಬಳಸಿ ಕರೆ ರೆಕಾರ್ಡ್ ಮಾಡುವುದು ಸಾಧ್ಯವಾಗುವುದಿಲ್ಲ. ಆ್ಯಂಡ್ರಾಯ್ಡ್‌ನಲ್ಲಿ ಸುರಕ್ಷತೆ ಮತ್ತು ಗೋಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್ ಹಲವು ಕ್ರಮಗಳಿಗೆ ಮುಂದಾಗಿದ್ದು ಕಾಲ್ ರೆಕಾರ್ಡಿಂಗ್ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಲಿದೆ. ಇದರಲ್ಲಿ ಟ್ರೂ ಕಾಲರ್ ಕೂಡ ಒಳಗೊಂಡಿದೆ. ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಥರ್ಡ್ ಪಾರ್ಟಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿತ್ತು. ಇದೀಗ ಅದನ್ನು ಜಾರಿಗೆ ತರಲು ನಿರ್ಧರಿಸಿದೆ.
ಥರ್ಡ್ ಪಾರ್ಟಿ ವ್ಯಕ್ತಿಗಳಿಂದ ಅಭಿವೃದ್ಧಿಪಡಿಸಲಾದ ಧ್ವನಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬಳಕೆದಾರರ ಗೌಪ್ಯತೆಯ ಮೇಲೆ ಆಕ್ರಮಣ ಎಂದು ಪರಿಗಣಿಸಿ ಗೂಗಲ್ ಇಂತಹದೊಂದು ಮಹತ್ತರ ಬದಲಾವಣೆಗೆ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ. ಟ್ರೂ ಕಾಲರ್ ಈಗಾಗಲೇ ಗ್ರಾಹಕರ ಬೇಡಿಕೆಯಂತೆ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಕರೆ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆದರೆ ಇದೀಗ ಗೂಗಲ್ ಡೆವಲಪರ್ ಪ್ರೋಗ್ರಾಂ ನೀತಿಗಳ ಪ್ರಕಾರಇನ್ಮುಂದೆ ಟ್ರೂ ಕಾಲರ್ ಕಾಲ್ ರೆಕಾರ್ಡಿಂಗ್ ಅನ್ನು ಸ್ಟಾಪ್ ಮಾಡಲಿದೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕಳೆದ ಕೆಲ ವರ್ಷಗಳಿಂದ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ವಿರುದ್ಧ ಗೂಗಲ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ವರ್ಷಗಳ ಹಿಂದೆ Android 6 ನಲ್ಲಿ ಗೂಗಲ್ ನೈಜ-ಸಮಯದ ಕರೆ ರೆಕಾರ್ಡಿಂಗ್ ಅನ್ನು ನಿರ್ಬಂಧಿಸಿತ್ತು ಮತ್ತು Android 10 ನೊಂದಿಗೆ ಮೈಕ್ರೊಫೋನ್‌ನಲ್ಲಿ ಕರೆ ರೆಕಾರ್ಡಿಂಗ್ ಅನ್ನು ಮತ್ತಷ್ಟು ನಿರ್ಬಂಧಿಸಿತ್ತು. ಆದರೆ ಗೂಗಲ್ ಇದೀಗ ತನ್ನ ನೀತಿಯನ್ನು ನವೀಕರಿಸಿರುವುದರಿಂದ ಇನ್ಮುಂದೆ ಥರ್ಡ್ ಪಾರ್ಟಿ ವ್ಯಕ್ತಿಗಳಿಂದ ಅಭಿವೃದ್ಧಿಪಡಿಸಲಾದ ಧ್ವನಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಕರೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ.